‘‘ಇವನ್ಯಾರವ... ಇವನ್ಯಾರವ... ಎನ್ನದಿರಯ್ಯ. ಇವ ನಮ್ಮವ... ಇವ ನಮ್ಮವ... ಎಂದೆಣಿಸಯ್ಯ ಕೂಡಲ ಸಂಗಮದೇವ’’

ಬಸವತತ್ವದಿಂದ ವಿಮುಖವಾಗುತ್ತಿರುವ ಮಠಗಳು

-ಕೊಟ್ರೇಶ್ ಎಸ್.ಉಪ್ಪಾರ್
ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ
ಇವ ನಮ್ಮ ಕೂಡಲ ಸಂಗನ ಮನೆಯ ಮಗನೆಂದೆನಿಸಯ್ಯ||
     ಮೂರೇ ಸಾಲುಗಳಾದರೂ ಇಡೀ ವಿಶ್ವ ಮಾನವ ಪ್ರೀತಿಯನ್ನು ಅಂತರ್ಗತ ಮಾಡಿಕೊಂಡಿರುವ, ಸಕಲಕೂ ಮಂಗಳ ಬಯಸುವ ಮಹತ್ಸಾಲುಗಳಿವು. ಇದರಲ್ಲಿ ಬಸವಣ್ಣನವರ ಅಂತರಂಗ, ಬಹಿರಂಗಗಳ ಮನೋವಾಂಛಲ್ಯಗಳು ಜ್ಯೋತಿಗಳಾಗಿ ಬೆಳಗಿವೆ.
     ಕನ್ನಡದ ನೆಲದ ಮೇಲೆ ಸಾಮಾಜಿಕ ಹಾಗೂ ಧಾರ್ಮಿಕವಾಗಿ ಜಾಗೃತಿ ಆಂದೋಲನ ಕೈಗೊಂಡು ಜನರನ್ನು ವಿಚಾರವಂತಿಕೆಯೆಡೆಗೆ ಕೊಂಡೋಯ್ದ ಮಹಾನ್ ಶರಣ ಬಸವಣ್ಣ.
      ಹಿಂದಿನ ಕಾಲದಿಂದಲೂ ನಮ್ಮ ಭಾರತೀಯ ಸಮಾಜದಲ್ಲಿ ರಾಜವರ್ಗ-ಪ್ರಜಾವರ್ಗ, ಪುರೋಹಿತವರ್ಗ-ಭಕ್ತವರ್ಗ, ಪುರುಷವರ್ಗ-ಸ್ತ್ರೀವರ್ಗ ಹೀಗೆ ವಿಘಟನೆಯಾಗಿ ಒಂದು ಇನ್ನೊಂದನ್ನು ಶೋಷಿಸುತ್ತಾ ಸಾಗಿಬಂದಿರುವುದು ನಮಗೆಲ್ಲರಿಗೂ ತಿಳಿದವಿಷಯ. ಈ ಅನ್ಯಾಯದ ವಿರುದ್ಧ ಧ್ವನಿಯೆತ್ತಿ ಸಮಸಮಾಜದ ನಿರ್ಮಾಣಕ್ಕಾಗಿ ಜತ್ಯಾತೀತ, ಧರ್ಮತೀತವಾಗಿ ಸಂಘಟಿಸಿ ವಿಶ್ವ ಮಾನವೀಯ ನೆಲೆಗಟ್ಟಿನಲ್ಲಿ ಕಾರ್ಯತತ್ಪರರಾಗಿ ಜನ ಮನ ಬೆಳಗಿದವರು ಬಸವಣ್ಣನವರು.
     ಈ ಚಳವಳಿಯಲ್ಲಿ ಭಾಗಿಯಾಗಿದ್ದ ಶರಣರು ಉತ್ಕಟ ಅಂತರಂಗದ ತೊಳಲಾಟದ ಉಪನಿಷ್ಪತ್ತಿಯಾಗಿ ವಚನ ಸಾಹಿತ್ಯ ರಚಿಸಿದರು. ಇವು ಕೇವಲ ವಚನಗಳಲ್ಲ ಅನುಭಾವದ ನುಡಿಗಳು.

ಬ್ರಹ್ಮ ಪದವಿಯನೊಲ್ಲೆ, ವಿಷ್ಣು ಪದವಿಯನೊಲ್ಲೆ
ರುದ್ರ ಪದವಿಯನೊಲ್ಲೆ,
ನಾನು ಮತ್ತಾವ ಪದವಿಯನೊಲ್ಲೆನಯ್ಯಾ,
ಕೂಡಲ ಸಂಗಮದೇವಾ, ನಿಮ್ಮ ಸದ್ಭಕ್ತರ
ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯ|
     ಹೀಗೆ ಯಾವುದೇ ಆಸೆ, ಆಕಾಂಕ್ಷೆಗಳಿಗೂ ಶರಣರು ಮಾರು ಹೋದವರಲ್ಲ. ಬದಲಾಗಿ ಬದುಕಿನಲ್ಲಿ ಮುಕ್ತತೆಯತ್ತ ಪಯಣ ಬೆಳೆಸಿದವರು.
     ಬಸವಣ್ಣನವರು ಪುರೋಹಿತಶಾಹಿ ವರ್ಗದಿಂದ ಬಂದವರಾದರೂ ಪೌರೋಹಿತ್ಯವನ್ನು ದಿಕ್ಕರಿಸಿ ಸಕಲ ಚರಾಚರ ವಸ್ತುಗಳಲ್ಲಿಯೂ ದೈವತ್ವವನ್ನು ಕಂಡು ಅದರಂತೆ ನಡೆ ನುಡಿಯಲ್ಲಿಯೂ ಪಾಲಿಸಿದವರು.
ಅರಗು ತಿಂದು ಕರಗುವ ದೈವವ
ಉರಿಯ ಕಂಡರೆ ಮುರುಟುವ
ದೈವವನೆಂತು ಸರಿಯೆಂಬೆನಯ್ಯಾ?
ಅವಸರ ಬಂದರೆ ಮಾರುವ
ದೈವವನೆಂತು ಸರಿಯೆಂಬೆನಯ್ಯಾ?
ಸಹಜ ಭಾವ ನಿಜೈಕ್ಯ ಕೂಡಲ ಸಂಗಮದೇವಾ|
     ಹೀಗೆ ಮಣ್ಣಿನಿಂದ ಮಾಡಿದ, ಕಲ್ಲಿನಿಂದ ಮಾಡಿದ, ಲೋಹಗಳಿಂದ ಮಾಡಿದ ಮಾನವ ಸೃಷ್ಠಿಯ ದೈವವನ್ನು ದಿಕ್ಕರಿಸಿ, ಮೂರ್ತಿ ಪೂಜೆಯನ್ನೇ ಖಂಡಿಸುತ್ತಾ...
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ
ಕೂಡಲ ಸಂಗಮದೇವಯ್ಯ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ|
     ಪರಮಾತ್ಮನ ಇರುವು ಆದಿ ಅಂತ್ಯವಿಲ್ಲದ್ದು. ಜಗದೊಡೆಯನಾದ ಆ ದಿವ್ಯ ಶಕ್ತಿ ಇಡೀ ಲೋಕವನ್ನು ಆವೃತಗೊಂಡಿದೆ. ಅವನ ಪಾದಗಳುಪಾತಾಳಕ್ಕಿಂತಲೂ ಆಚೆ ಚಾಚಿವೆ, ಅವನ ಶಿಖಾಂತ ಬ್ರಂಹ್ಮಾಂಡಕ್ಕಿಂತಲೂ ಆಚೆ ಹೋಗಿದೆ. ಅವನೂ ಯಾರಿಗೂ ನಿಲುಕದವನು, ಗೋಚರಿಸದವನು, ವಿಶ್ವರೂಪಿಯಾದ ಅಪ್ರತಿಮ ಶಕ್ತಿ ಲಿಂಗ ರೂದಲ್ಲಿ ಎನ್ನ ಕರಸ್ಥಲಕ್ಕೆ ಬಂದು ದರ್ಶನ ನೀಡಿದನು ಎನ್ನುವ ವಿಶ್ವದಷ್ಟೇ ವಿಶಾಲ ದೃಷ್ಠಿ ಈ ವಚನದಲ್ಲಿ ಮಿಳಿತವಾಗಿದೆ.
     ಇಂತಹ ವಿರ್ಶವ ದೃಷ್ಠಿ ಬಸವನನ್ನು ಇಂದು ಬಹುತೇಕ ಮಠಗಳು ಬಹಿರಂಗದಲ್ಲಿ ಬಸವತತ್ವವನ್ನು ಸಾರುವ ಕೇಂದ್ರಗಳಂತೆ ಬಿಂಬಿತವಾದರೂ ಅಂತರಂಗದಲ್ಲಿ ಮೂರ್ತಿ ಪೂಜೆ, ಪಾದ ಪೂಜೆ, ಅಡ್ಡ ಫಲ್ಲಕ್ಕಿ, ಜಾತಿಪದ್ದತಿಗಳನ್ನು ಬಲವಾಗಿ ಅಪ್ಪಿಕೊಂಡು ಕೆಳವರ್ಗದ ಜನತೆಯನ್ನು ಇನ್ನೂ ಶೋಷಣೆ ಮಾಡುತ್ತಿರುವುದು ದುರಂತದ ಸಂಗತಿ. ಯಾವ ಸಾಮಾಜಿಕ ಅನಿಷ್ಟಗಳು ದೂರಾಗಿ ಎಲ್ಲರೂ ಸರ್ವಸಮರಾಗಬೇಕೆಂದು ಬಸವಣ್ಣನವರು ಚಳವಳಿ ಮಾಡಿ ಸಮಸಮಾಜದ ಕನಸು ಕಂಡಿದ್ದರೋ ಅಂತಹ ಅನಿಷ್ಠಗಳಿಗೆ ಜೀವ ತುಂಬಿ ಇಂದಿನ ಮಠಗಳು ಬಸವ ತತ್ತ್ವಕ್ಕೆ ವಂಚನೆ ಮಾಡುತ್ತಿವೆ.
ಜಾತಿಗೊಂದು ಮಠ ಹುಟ್ಟಿ ಜಾತೀಯತೆಯ ಕಂದಕವನ್ನು ಸೃಷ್ಠಿಸಿ ಸಮಾಜದ ಅಸಮತೋಲನಕ್ಕೆ ನಾಂದಿಹಾಡುತ್ತಿರುವುದು ಭವಿಷ್ಯದ ದುರಂತವೆಂದೇ ಹೇಳಬಹುದು. ಬಸವಣ್ಣ ಕಾಯಕವೇ ಕೈಲಾಸವೆಂದು ಭಾವಿಸಿ ಪ್ರತಿಯೊಬ್ಬನಲ್ಲಿಯೂ ಶರಣತ್ವವನ್ನು ಶೋಧಿಸಿ ಅವರಿಗೆ ಲಿಂಗಧಾರಣೆ ಮಾಡಿ ಲಿಂಗವಂತರನ್ನಾಗಿ ಮಾಡುತ್ತಾ ಜತ್ಯಾತೀತ ಹಾಗೂ ಮಾನವೀಯ ಸಂಬಂಧದ ನೆಲೆಯಲ್ಲಿ ಲಿಂಗಾಯತ ಧರ್ಮವನ್ನು ಪೋಷಿಸಿ, ಬೆಳೆಸಿದರು. ಆದರೆ ಈಗಿನ ಮಠಗಳು ಬಸವಣ್ಣನ ಭಾವಚಿತ್ರವನ್ನು ದೊಡ್ಡದಾಗಿ ಅನಾವರಣಗೊಳಿಸಿ ಮೂರ್ತಿಪೂಜೆ ಖಂಡಿಸಿದ ವ್ಯಕ್ತಿಯನ್ನೇ ಮೂರ್ತಿಯಾಗಿ ಮಾಡಿ ಹೂ ಅಲಂಕಾರಗೈದು ಭಕ್ಷ್ಯ ಭೋಜನಗಳಿಂದ ನೈವೇಧ್ಯ ಮಾಡಿ ಅವರ ತತ್ತ್ವಗಳನ್ನು ಗಾಳಿಗೆ ತೂರಿ ಕೇಕೆಹಾಕುತ್ತಿರುವುದನ್ನು ಕಾಣುತ್ತಿದ್ದೇವೆ.
    ಬ್ರಾಹ್ಮಣೇತರ ಪುರೋಹಿತಶಾಹಿ ವರ್ಗವೆಂದೇ ಬಿಂಬಿತವಾದ ವೀರಶೈವ ಧರ್ಮದ ಕೆಲವು ಮಠಾದೀಶರು ಅತ್ತ ಸಿದ್ದಲಿಂಗಲಿಂಗಸ್ವಾಮಿಗಳ ಸಿದ್ಧಾಂತಗಳನ್ನು( ಮೂರ್ತಿ ಪೂಜೆ, ಪ್ರಬಲ ಜಾತೀಯತೆ, ಹೋಮ ಹವನ, ಅಡ್ಡ ಪಲ್ಲಕ್ಕಿ ಉತ್ಸವ ಇತ್ಯಾದಿ) ಬಿಟ್ಟುಕೊಡದೆ ಇತ್ತ ಬಸವಣ್ಣನನ್ನೂ ನಾಮಕಾವಸ್ಥೆಗೆ ಬಳಸಿಕೊಳ್ಳುತ್ತಾ ಶಿವಶರಣರ ಲಿಂಗಾಯಿತ ಧರ್ಮದ ತತ್ತ್ವ ಸಿದ್ಧಾಂತಗಳನ್ನು ಬಳಸದೇ ಸಮಾಜಕ್ಕೆ ಬೂದಿ ಬಳಿಯುವ ಕೆಲಸ ಮಾಡುತ್ತಿರುವುದು ವಿಪರ್ಯಾಸವೇ ಸರಿ.
     ಕೆಳವರ್ಗದ ಜನತೆಯ ಏಳಿಗೆಗಾಗಿ ಹೋರಾಡಿ ದುರಂತ ಮರಣಕ್ಕೀಡಾದ ತಲಸ್ಪರ್ಶಿ ಚಿಂತನೆಯ ಸಮ ಸಮಾಜದ ಕನಸುಗಾರ , ಮಾನವೀಯತೆಯ ಧ್ಯೋತಕ ಬಸವಣ್ಣನ ತತ್ತ್ವ ಸಿದ್ಧಾಂತಗಳಿಗೆ ದಕ್ಕೆ ಬಂದಾಗ ಪುರೋಹಿತಶಾಹಿಗಳಾಗಲೀ ಅಥವಾ ಬ್ರಾಹ್ಮಣೇತರ ಪುರೋಹಿತಶಾಹಿಗಳಾಗಲೀ ಬೆಂಬಲಕ್ಕೆ ನಿಲ್ಲುವುದಿಲ್ಲ ಏಕೆಂದರೆ ಬಸವಣ್ಣನವರು ಈ ಎರಡು ವರ್ಗ ಪೋಷಿಸುತ್ತಿರುವ ವಿಧಿ-ವಿಧಾನಗಳನ್ನು ದಿಕ್ಕರಿಸಿದವರು. ಇದಕ್ಕೆ ತಾಜಾ ಉದಾಹರಣೆ ಎಂದರೆ ಇತ್ತೀಚೆಗೆ ಬಾಳೆಹೊನ್ನೂರು ಪೀಠದ ಶ್ರೀಗಳು ಬಸವಣ್ಣನವರ ವಚನಗಳು ಸಿದ್ಧಾಂತ ಶಿಖಾಮಣಿಯ ಅನುವಾದಗಳು ಅಂದಾಗ ಪ್ರತಿಕ್ರಿಯಿಸಿದ್ದು ಬಸವ ತತ್ತವದ ನೆಲೆಯಲ್ಲಿ ಬದುಕುತ್ತಿರುವ ಶರಣ ಸಾಹಿತ್ಯ ಪರಿಷತ್ತಿನ ಸಂಘಟಕರು, ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಹಾಗೂ ಕೆಳವರ್ಗದ ಪ್ರಗತಿಪರ ಚಿಂತಕರು , ಸಾಹಿತಿಗಳು ಮಾತ್ರ!. ಏಕೆ ಹೀಗಾಗುತ್ತಿದೆ? ಮಹಾನ್ ಮಾನವತವಾದಿಗೆ , ವಿಶ್ವ ದೃಷ್ಠಿಯ ಸತ್‍ಶರಣಂಗೇಕೆ ಈ ತಾತ್ಸಾರ ಭಾವನೆ ತಿಳಿಯುತ್ತಿಲ್ಲ. ಮಹಾಪುರುಷರನ್ನೆಂದೂ ಈ ಸಮಾಜ ಪ್ರೀತಿಯಿಂದ ಸ್ವೀಕರಿಸಿಲ್ಲವೆಂಬುದು ಅಷ್ಟೇ ಸತ್ಯವಾದುದುದಲ್ಲವೇ?